ಮೊನ್ನೆ, ನಮ್ಮ ಮನೆಯಲ್ಲೊಂದು ಅತ್ಯಾಶ್ಚರ್ಯವಾದ ಹಾಗೂ ಸಂತೋಷಕರವಾದ ಘಟನೆ ನಡೆಯಿತು.
ನಮ್ಮ ದೊಡ್ಡಪ್ಪನ ಮನೆಯ ದನ, ಬೆಳಗ್ಗೆ ಮೇಯಲು ಬಿಟ್ಟ ತಕ್ಷಣ ನಮ್ಮನೆಗೆ ಬರುತ್ತದೆ. ನಮ್ಮಮ್ಮ ಹಿಂದಿನ ದಿನ ಉಳಿದಿರುವುದೆಲ್ಲವನ್ನು ಕೊಟ್ಟ ಬಳಿಕವಷ್ಟೇ ಅದರ ಮುಂದಿನ ತಿರುಗಾಟ. ಬಿಟ್ಟೊಡನೆ ನಮ್ಮನೆಗೆ ಬರದೆ ಅದು ಹೋಗುವುದಿಲ್ಲ, ಒಂದಿನ ಬಂದಿಲ್ಲ ಅಂದ್ರೆ ನಮ್ಮಮ್ಮ "ಯಾಕೆ ಇಂದು ದನ ಬಂದಿಲ್ಲ, ಯಾಕೆ ಇವತ್ತು ಮೇಯಲು ಬಿಟ್ಟಿಲ್ಲ" ಎಂದು ನಮ್ಮ ಅಣ್ಣನಲ್ಲಿ (ದೊಡ್ಡಪ್ಪನ ಮಗ) ವಿಚಾರಿಸುತ್ತಾಳೆ.
ಸುಮಾರು ೫-೬ ವರ್ಷದ ಹಿಂದೆ ನಮ್ಮಮ್ಮನೆ ಕತ್ತಿನಲ್ಲಿದ್ದ ಲಕ್ಷ್ಮಿ ಕಾಸು (ಬಂಗಾರದ pendant) ಕಳೆದು ಹೋಯಿತು. ಕಡೆಯ ಬಾರಿ ಯಾವಾಗ ನೋಡಿಕೊಂಡಿದ್ದು ಎಂದು ನೆನಪು ಮಾಡಿಕೊಂಡಾಗ ದನಕ್ಕೆ ತಿನ್ನಲು ಕೊಡಲು ಹೋಗಬೇಕಾದರೆ ಇತ್ತು ಎಂದಾಯಿತು. ಆ ಜಾಗದಲ್ಲೆಲ್ಲ ಹುಡುಕಿದೆವು. ಎಲ್ಲೂ ಸಿಗಲಿಲ್ಲ. ದನವೇ ತಿಂದಿರುವುದು ನಿಶ್ಚಿತ ಎಂದಾಯಿತು. ದೊಡ್ಡಪ್ಪನ ಮಗನಲ್ಲಿ ಹೇಳಿದಳು ಅಮ್ಮ. ಅವನು ಅದನ್ನು ೩-೪ ದಿನ ಮೇಯಲು ಬಿಡದೆ ಮನೆಯಲ್ಲೇ ಕಟ್ಟಿ ಹಾಕಿ, ಅದು ಸಗಣಿ ಹಾಕಿದಾಗಲೆಲ್ಲ ಕಣ್ಣು ಹಾಯಿಸಿದರು. ಲಕ್ಷ್ಮಿ ಕಾಸು ಸಿಗಲಿಲ್ಲ!
ಕಾಲ ಕ್ರಮೇಣ ಘಟನೆ ನೆನಪಿನಿಂದ ಮಾಸಿತು. ಈಗ್ಗೆ, ಸುಮಾರು ೩ ವರ್ಷಗಳ ಹಿಂದೆ ಮುಪ್ಪಾದ ಆ ದನ ಸತ್ತು ಹೋಯಿತು. ಸುಮಾರು ೨೨ ವಯಸ್ಸಾದ ಆ ದನ ನಮ್ಮ ದೊಡ್ಡಪ್ಪನ ಮನೆಯಲ್ಲೇ ಹುಟ್ಟಿದ್ದು. ಮನೆಯ ಮುಂದುಗಡೆ ಹಿತ್ತಲಿನಲ್ಲಿ ಅದರ ಸಂಸ್ಕಾರ ನೆರವೇರಿತು. (ಮಣ್ಣಿನಲ್ಲಿ ಹುಗಿದರು). ಮೊನ್ನೆ, ೨-೩ ದಿನಗಳ ಹಿಂದೆ ದೊಡ್ಡಪ್ಪನ ಮನೆಯವರು ದನ ಹುಗಿದ ಜಾಗದಲ್ಲಿ ಗಿಡ ನೆಡಲು ನೆಲ ಅಗೆಸಿದರು. ಅಗೆದವನು ಮಣ್ಣನ್ನು ಅಲ್ಲೇ ಪಕ್ಕಕ್ಕೆ ರಸ್ತೆ ಬದಿಯಲ್ಲಿ ಹಾಕಿದ. ದಾರಿಯಲ್ಲಿ ಶಾಲೆಗೆ ಹೋಗುವ ಹುಡುಗಿಯೊಬ್ಬಳು ದೊಡ್ಡಮ್ಮನನ್ನು ಕರೆದು "ನೋಡಿ ಅಮ್ಮಾವ್ರೇ, ಇಲ್ಲೇನೋ ಬಂಗಾರದ್ದು ಬಿದ್ದೈತೆ" ಎಂದು ಆ ಲಕ್ಷ್ಮಿ ಕಾಸನ್ನು ಕೊಡುವುದೇ! ಅದನ್ನು ತೊಳೆದು ತಂದು ದೊಡ್ಡಮ್ಮ ಅಮ್ಮನಲ್ಲಿಗೆ ತಂದು ತೋರಿಸಿದಾಗ, ಅದು ಅಮ್ಮನದೇ ಎಂದು ದೃಢಪಟ್ಟಿತು. ನಮ್ಮ ಆಶ್ಚರ್ಯ ಮತ್ತು ಸೊಂತೋಷಕ್ಕೆ ಪಾರವೇ ಇರಲಿಲ್ಲ. :-)
ದನದ ದೇಹದ ಯಾವ ಭಾಗದಲ್ಲಿ ಲಕ್ಷ್ಮಿ ಕಾಸಿತ್ತು ಎಂಬುದರ ಬಗ್ಗೆ ನಾನಿನ್ನೂ ಸ್ವಲ್ಪ ಸಂಶೋಧನೆ ಮಾಡಬೇಕಿದೆ.