ಹೆಚ್ಚಿನ ನಾಗರಿಕತೆಗಳ ಪ್ರಕಾರ ಸೂರ್ಯ ದೇವನೇ ಎಲ್ಲರಿಗಿಂತ ಪ್ರಮುಖ ದೇವರು. ಪ್ರಖ್ಯಾತ ಈಜಿಪ್ಟ್ ಪುರಾಣದ ಪ್ರಕಾರ "ರ" ಎಂದು ಕರೆಸಿಕೊಳ್ಳುತ್ತಿದ್ದ ಸೂರ್ಯ ಅವರಿಗೆ ದೇವರಾಗಿದ್ದನು. "ರ" ಆಕಾಶದಲ್ಲಿ ದೋಣಿಗಳಲ್ಲಿ ಸಾಗುತ್ತಾನೆ ಎಂದು ಈಜಿಪ್ಟ್ ನಾಗರಿಕತೆ ಹೇಳುತ್ತದೆ. ರೋಮನ್ ಸಾಮ್ರಾಜ್ಯದಲ್ಲಿ "ಸೋಲ್ ಇನ್ವಿಕ್ಟಸ್" ಎಂದು ಸೂರ್ಯದೇವನನ್ನು ಕರೆಯುತ್ತಿದ್ದರು. ಜರ್ಮನ್ ಪುರಾಣದ ಪ್ರಕಾರ ಸೂರ್ಯದೇವನು "ಸೋಲ್" ಎಂದು ಕರೆಯಿಸಿಕೊಳ್ಳುತ್ತಿದ್ದನು. ಗ್ರೀಕ್ ಪುರಾಣದಲ್ಲೂ ಕೂಡ ಸೂರ್ಯದೇವನು ಪ್ರಮುಖನು. ಅವನನ್ನು "ಹೀಲಿಯೋಸ್", "ಟೈಟನ್", ಮತ್ತು "ಅಪೋಲೋ" ಎಂಬುದಾಗಿ ಕರೆಯುತ್ತಿದ್ದರು. ಪುರಾತನ ನಾಗರಿಕತೆ ಮೆಸೊಪೊಟೊಮಿಯಾದಲ್ಲಿ "ಶಮಶ್" ಎಂದು ಕರೆಯಲಾಗುತ್ತಿದ್ದ ಸೂರ್ಯದೇವನು ಪ್ರಮುಖ ದೇವನು. ದಕ್ಷಿಣ ಅಮೇರಿಕಾದ ಪ್ರಸಿದ್ಧ ನಾಗರಿಕತೆ ಇನ್ಕಾದಲ್ಲಿ "ಇಂತಿ" ಎಂದು ಸೂರ್ಯದೇವನನ್ನು ಕರೆಯುತ್ತಿದ್ದರು. ಹೀಗೆ ಉದಾಹರಿಸುತ್ತ ಹೋದರೆ ಸೂರ್ಯನೇ ಪ್ರಮುಖ ದೇವನಾದ ಇನ್ನೂ ಹಲವಾರು ನಾಗರಿಕತೆಗಳು, ಪುರಾಣಗಳು ಸಿಕ್ಕುತ್ತವೆ.
ಹಿಂದೂ ಪುರಾಣದಲ್ಲೂ ಸೂರ್ಯದೇವ ಪ್ರಮುಖ ದೇವರುಗಳಲ್ಲೊಬ್ಬ. ಆದರೆ ಎಲ್ಲರಿಗಿಂತ ಮಿಗಿಲು ತ್ರಿಮೂರ್ತಿಗಳಾದ ಹರಿ, ಹರ, ವಿರಿಂಚಿಗಳು (ಬ್ರಹ್ಮ), ಎಂದು ನಾನಂದುಕೊಂಡಿದ್ದೆ! ಈ ಅಭಿಪ್ರಾಯಕ್ಕೆ ಧಕ್ಕೆಬರುವಂತ ರೀತಿಯಲ್ಲಿ ಕುಮಾರವ್ಯಾಸ ಭಾರತದಲ್ಲಿ ಬರೆಯಲಾಗಿದೆ. ಅರಣ್ಯಪರ್ವದ ೭ ನೇ ಸಂಧಿಯಲ್ಲಿ ಅರ್ಜುನನನ್ನು ಇಂದ್ರನ ಆಸ್ಥಾನಕ್ಕೆ ಕರೆದೊಯ್ಯುತ್ತ ಇಂದ್ರಸಾರಥಿ ಮಾತಲಿಯು ಅರ್ಜುನನಿಗೆ ಭೂಮಿ, ಬೇರೆ ಬೇರೆ ಲೋಕ ಹಾಗೂ ಬ್ರಹ್ಮಾಂಡಗಳ ಬಗ್ಗೆ ವಿವರಿಸುತ್ತಾನೆ. ಆ ಸಂದರ್ಭದಲ್ಲಿ ದಿನಕರನು ಪರಮಾತ್ಮ. ಮಹಾದೇವರಾದ ಹರಿಹರವಿರಿಂಚಿಗಳು ಅತಿ ಬಲವಂತನಾದ ಸೂರ್ಯನನ್ನು ಪ್ರಾರ್ಥಿಸುತ್ತಾರೆ. ಕಾಲವು ರವಿರಥದ ಚಕ್ರ ಎಂದು ಹೇಳುತ್ತಾನೆ. ಸೂರ್ಯ ಎಂದರೆ ಬೆಂಕಿ. ಸುರಪಥಿಯಾದ ದೇವೇಂದ್ರನ ಆಸ್ಥಾನದ ದೇವತೆಗಳಲ್ಲಿ ಒಬ್ಬನಾದ ಅಗ್ನಿ ಎಂದರೂ ಬೆಂಕಿಯೇ. ಅಗ್ನಿ ಇಂದ್ರನಿಗೆ ನಮಿಸಿದರೆ, ಇಂದ್ರ ತ್ರಿಮೂರ್ತಿಗಳಿಗೆ ನಮಿಸುತ್ತಾನೆ ಹಾಗೂ ತ್ರಿಮೂರ್ತಿಗಳಿಗೆ ಸೂರ್ಯನು ದೇವನಾದರೆ, ಅಗ್ನಿ ಮತ್ತು ಸೂರ್ಯ ಬೇರೆ ಬೇರೆ ಆಗಬೇಕಾಗುತ್ತದೆ! ಹಾಗಾದರೆ ಅಗ್ನಿ ಮತ್ತು ಸೂರ್ಯ ಬೇರೆ ಬೇರೆ ದೇವರೇ? ಹಿಂದೂ ಧರ್ಮದ ಜಿಜ್ಞಾಸೆಗಳಲ್ಲಿ ಇದೂ ಒಂದೇ?