ನಾನು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ತಲವಾಟ ಊರಿನವನು. ತಲವಾಟ ಹೆಸರು ಹೇಗೆ ಬಂತು? ಗೊತ್ತಿಲ್ಲ, ಇರಲಿಬಿಡಿ. ಮಲೆನಾಡಿನ ಕೇಂದ್ರವಾದ ಇದು ಯಾವುದೇ ಮಲೆನಾಡಿನ ಹಳ್ಳಿಗಳಂತೆ ಒಂದು ಹಳ್ಳಿ. ನಾನು ಹುಟ್ಟಿದ್ದು ಬೆಳೆದಿದ್ದು ಎಲ್ಲ ಸರಿಸುಮಾರು ಇಲ್ಲೇ. ಈಗ ಇರುವುದು ಮಾತ್ರ, ಉದ್ಯೋಗ ಅರಸಿ ಬಂದ, ಬೆಂಗಳೂರಿನಲ್ಲಿ. ನಮ್ಮ ಬೀದಿಯಲ್ಲಿ ತುಂಬಾ ಚಿಕ್ಕ ಮಕ್ಕಳಿದ್ದಾರೆ. ಆದರೆ ಅವರಿಗೆ ಆಟವಾಡಲು ಜಾಗವೇ ಇಲ್ಲ! ಸುಮ್ಮನೆ ಹೀಗೆ ಯೋಚಿಸುತ್ತ ಕುಳಿತಿರಬೇಕಾದರೆ, ನಾನು ಯಾವ್ಯಾವ ಆಟ ಆಡಿದ್ದೆ ಊರಿನ ಅಂಗಳ ರಸ್ತೆಗಳಲ್ಲಿ ಎಂದು ನೆನಪು ಮಾಡಿಕೊಳ್ಳುತ್ತ ಹೋದೆ. ಹಾಗೆಯೇ ಗೀಚಿದೆ. ತಾವು ಬೇರೆ ಆಟಗಾಳನ್ನಾಡಿದ್ದಲ್ಲಿ, ಅದನ್ನು ತಿಳಿಸಲು ಸ್ವಾಗತವಿದೆ. ಈಗ ಊರಲ್ಲಿರುವ ಮಕ್ಕಳು ಇವನ್ನೆಲ್ಲ ಆಡುತ್ತಾರೋ ಇಲ್ಲವೋ ನನಗೆ ಗೊತ್ತಿಲ್ಲ.
ಸದ್ಯಕ್ಕೆ ಇಷ್ಟೇ ನೆನಪಾಗುತ್ತಿವೆ,
- ಕ್ರಿಕೆಟ್- ಚಿನ್ನಿ ದಾಂಡು
- ಲಗೋರಿ
- ಗೋಲಿ
- ಬುಗುರಿ
- ನೆಲಕೋತಿ (ಕಲ್ಲು ಸಗಣಿ ಅಂದರೂ ಇದೇ ಹೌದೋ ಅಲ್ಲವೋ ನನಗೆ ಗೊತ್ತಿಲ್ಲ)
- ಮರಕೋತಿ
- ಚಿಬ್ಬಿ (ಕುಂಟಬಿಲ್ಲೇ)
- ಸಿಕ್ಕರ ಚೆಂಡು (ರಾಮನ ಚೆಂಡು ಭೀಮನ ಚೆಂಡು)
- ಕಂಬ ಕಂಬದಾಟ
- ಕಣ್ಣ ಮುಚ್ಚೆ ಕಾಡೇ ಗೂಡೆ
- ಜೂಟಾಟ
- ಕುಂಟಾಟ
- ಕಳ್ಳ ಪೊಲೀಸ್
- ಕಬಡ್ಡಿ
- ಕೊಕ್ಕೋ
ಇವಲ್ಲದೇ, ತೋಟ, ಬೆಟ್ಟ, ಗುಡ್ಡ, ಬ್ಯಾಣ ಅಲೆಯುವುದಂತೂ ಇದ್ದೇ ಇತ್ತು.
ಒಮ್ಮೊಮ್ಮೆ ನಮ್ಮ ಪಾಲಕರು ಕಲ್ಪಿಸಿದ ಪರಿಸರವನ್ನು ನಾವು ನಮ್ಮ ಮಕ್ಕಳಿಗೆ ಕಲ್ಪಿಸಲಾಗುವುದಿಲ್ಲವಲ್ಲ ಎಂಬ ಕೊರಗು ಉಂಟಾಗುತ್ತದೆ. ಅಥವಾ ಈಗಿನ ಉದ್ಯೋಗ ಬಿಟ್ಟು ತವರೂರಿಗೆ ವಾಪಾಸಾಗಬೇಕು!
5 comments:
ವಾಲೀಬಾಲ್,ಚನ್ನೇಮಣೆ ಆಡೇ ಇಲ್ವಾ?
ವಾಲೀಬಾಲ್ ಶಾಲೆಯಲ್ಲಿ ಮಾತ್ರ ಆಡ್ತಿದ್ವಿ. ಮನೆಯಲ್ಲೇ ಆಡುವ ಆಟಗಳ ಬಗ್ಗೆ ಬರೆಯಲಿಲ್ಲ. ಹಾಗಾಗಿ ಪಗಡೆ, ಕೇರಂ, ಚೆಸ್, ಇಸ್ಪೀಟ್, ಕೈ ಕಾಯಿಸಿ ಇನ್ನೊಬ್ಬರಿಗೆ ಹೊಡೆಯುವುದು ಮುಂತಾದುವು ಇಲ್ಲಿಯ ಪಟ್ಟಿಯಿಂದ ತಪ್ಪಿಸಿಕೊಂಡಿವೆ. ಚನ್ನೇಮಣೆ ನಾನು ಆಡಿಲ್ಲ.
ಇನ್ನೊಂದು ಆಟ ಮಳೆಗಾಲದಲ್ಲಿ ಅಡ್ತಿದ್ವಿ.. ಕೋಲನ್ನು ನೆಲದತ್ತ ಒಗೆಯಬೇಕು, ಅದು ಕೆಳಕ್ಕೆ ಬಿಳದೆ ನೆಲ್ಲಕ್ಕೆ ಚುಚ್ಚಬೇಕು. ಆದರೆ ಹೆಸರು ನೆನಪಾಗುತ್ತಿಲ್ಲ. ದೋಣಿ ಬಿಡುವುದು, ಮೀನು ಹಿಡಿಯುವುದನ್ನು ಮಾಡಿದ ನೆನಪು ಇನ್ನೂ ಇದೆ!!
ಕರೆಕ್ಟ್. ಮಳೆಗಾಲ ಬಂತೆಂದರೆ ಎಲ್ಲೆಂದಲ್ಲಿ ದೋಣಿ ಬಿಡುವುದು ಕೂಡ ನಮ್ಮ ಆಟವಾಗಿತ್ತು. ತೋಟದಲ್ಲಿ ಮೀನು ಹಿಡಿಯುವುದರ ಜೊತೆಗೆ, ಕಾದಿಗೆಗೆ ಆಣೆಕಟ್ಟು ಕಟ್ಟುವುದು ನಮ್ಮ ಖಾಯಂ ಆಟವಾಗಿತ್ತು.
:) Hudgir list alli first Adamane aata :D
Post a Comment